ನಮ್ಮ ಕನಸಿನ ಸುಂದರ ವಸತಿ ಶಾಲೆ

ಪ್ರತಿಭೆಗೆ ಪುರಸ್ಕಾರ ಎನ್ನುವ ಧ್ಯೇಯೋದ್ಧೇಶದೊಂದಿಗೆ ಪ್ರಾರಂಭವಾಗಿರುವ ವಸತಿ ಶಾಲೆಗಳು ದೇಶದ ಉತ್ತಮ ಪ್ರಜೆಯನ್ನು, ಸವ೯ರಿಂದಲೂ ಸ್ವೀಕಾರಾಹ೯ವಾದವರನ್ನು ಹೊರಹೊಮ್ಮಿಸಿ, ನಡೆಯುವ ನಾಣ್ಯಗಳನ್ನು ತಯಾರಿಸುವ ಟಂಕಶಾಲೆಗಳಂತಿರಬೇಕು.ವಸತಿ ಶಾಲೆಯತ್ತ ಮಕ್ಕಳನ್ನು ಸೆಳೆಯುವಂತಾಗಲು ಅದರ ಭೌತಿಕ ಪರಿಸರ ಆಕಷ೯ಕವಾಗಿರಬೇಕು. ಉತ್ತಮವಾದ ಶಾಲಾ ಕಟ್ಟಡ, ಶಾಲಾ ಸಂಕೀಣ೯, ಕೈತೋಟ, ಶುದ್ಧ ಕುಡಿಯುವ ನೀರು, ಒಳ್ಳೆಯ ವಸತಿ ವ್ಯವಸ್ಥೆ ತಮ್ಮನ್ನು ತಾವು ವೃತ್ತಿಗೆ ಅಪಿ೯ಸಿಕೊಂಡು ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಹಗಲಿರುಳೆನ್ನದೆ ಕಾಯಕದಲ್ಲಿ ನಿರತರಾಗಿರುವ ಆದಶ೯ ಶಿಕ್ಷಕರು, ಶಾಲೆಯನ್ನು ಒಂದು ಸುಂದರವಾದ ಕೇಂದ್ರ ಬಿಂದುವಾಗಲು ಪೂರಕವಾಗುತ್ತವೆ.

ವಿವಿಧ ಪ್ರಾದೇಶಿಕ, ಆಥಿ೯ಕ, ಸಾಮಾಜಿಕ, ಕೌಟುಂಬಿಕ ಹಿನ್ನೆಲೆಯಿಂದ ಬರುವ ಮಕ್ಕಳ ಬಾಳಿಗೆ ಭರವಸೆಯನ್ನು ತುಂಬುವಂತೆ ಇರುವ ಶಾಲೆ ಸ್ಫೂತಿ೯ಯ ಸೆಲೆಯಾಗಿರಬೇಕು. ಮಕ್ಕಳು ಆಗತಾನೇ ಅರಳಿದ ಕೋಮಲ ಹೂಗಳಂತಿದ್ದು, ಅವುಗಳು ಬಾಡದಂತೆ, ಚಿವುಟದಂತೆ ರಕ್ಷಿಸಬೇಕು. ತಂದೆ-ತಾಯಿಯನ್ನು ದೂರದ ಊರಿನಲ್ಲಿ ತೊರೆದುಬಂದ ಮಕ್ಕಳಿಗೆ ಶಾಲೆಯೇ ತಮ್ಮ ಮನೆಯಂತೆ ಕಾಣಬೇಕು. ಸದಾ ಮಕ್ಕಳ ಹಿತ ಕಾಪಾಡುವ ವಅವರ ನೋವು ನಲಿವುಗಳಲ್ಲಿ ಭಾಗಿಯಾಗುವ ತಂದೆ-ತಾಯಿಯ ಸ್ವರೂಪದಲ್ಲಿ ಶಿಕ್ಷಕರು, ನಿಲಯಪಾಲಕರು ಹಾಗೂ ಪ್ರಾಂಶುಪಾಲರಿರಬೇಕು. ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಅವರ ವೈಯಕ್ತಿಕ ಆರೋಗ್ಯದ ಬಗ್ಗೆ, ವಸತಿ ಮತ್ತು ಊಟದ ಬಗ್ಗೆ ಕಳಕಳಿ ಹೊಂದಿರಬೇಕು. ಮಕ್ಕಳ ಓದುಬರಹ ಅವರ ನಡೆನುಡಿಗಳ ಬಗ್ಗೆ ನಿರಂತರ ಜಾಗ್ರತೆ ವಹಿಸಬೇಕು. ಮಕ್ಕಳನ್ನು ಮಮತೆಯಿಂದ ಕಂಡು ಅವರ ಕುಂದು ಕೊರತೆಯನ್ನುಆಲಿಸಿ ಸೂಕ್ತ ಪರಿಹಾರವನ್ನು ಶೀಘ್ರದಲ್ಲಿ ನೀಡಬೇಕು. ದಿನದ 24 ಗಂಟೆಗಳ ಕಾಲ ಮಕ್ಕಳು, ಶಿಕ್ಷಕರು ಹಾಗೂ ಪ್ರಾಂಶುಪಾಲರು ಒಂದೇ ಸೂರಿನಡಿಯಲ್ಲಿರುವುದರಿಂದ ಮಕ್ಕಳ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗಿಯಾಗಿ, ಸೂಕ್ತ ಮಾಗ೯ದಶ೯ನ ನೀಡುವುದರ ಜೊತೆಗೆ, ಅವರ ಭಾವನೆಗಳಿಗೆ ಸ್ಪಂದಿಸಬೇಕು. ಶಾಲೆಯಲ್ಲಿ ನಿರಂತರವಾಗಿ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರಲ್ಲಿ ದೇಶಭಕ್ತಿಯನ್ನು ತುಂಬಿ, ಸ್ವಾವಲಂಬಿಗಳಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸತ್ಪ್ರಜೆಗಳಾಗಬೇಕು.